ಟರ್ಬಿಯಮ್
	ವಿರಳ ಭಸ್ಮಧಾತುಗಳ ಪೈಕಿ ಒಂದು; ಆವರ್ತ ಕೋಷ್ಟಕದಲ್ಲಿ 65ನೆಯ ಸ್ಥಾನದಲ್ಲಿ (ಅಂದರೆ ಪರಮಾಣು ಸಂಖ್ಯೆ 65 ಇರುವ) ಬರುವ ರಾಸಾಯನಿಕಧಾತು. ಈ ಕೋಷ್ಟಕದ ಮೂರನೆಯ ವರ್ಗದಲ್ಲಿ ವಿರಳ ಭಸ್ಮಧಾತುಗಳೆಂಬ ಹದಿನಾಲ್ಕು ಧಾತುಗಳಿವೆ. ಇವುಗಳಿಗೆ ಲ್ಯಾಂಥನೈಡುಗಳು ಎಂದೂ ಹೆಸರಿದೆ. ಟರ್ಬಿಯಮ್ಮಿನ ಪ್ರತೀಕ ಖಿb, ಪರಮಾಣು ತೂಕ 158.93. ಇದರ ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10
	        4 f8 ಯಾ 9	  5s2   5p6   5d1
ಇದರ ಸಮಸ್ಥಾನಿಗಳ ಪೈಕಿ ಒಂದು ಮಾತ್ರ ಸ್ಥಿರ. ಉಳಿದ ಇಪ್ಪತ್ತಮೂರು ವಿಕಿರಣಪಟು. ಆದ್ದರಿಂದ ಅಸ್ಥಿರ. ಈ ಧಾತುವನ್ನು ಆವಿಷ್ಕರಿಸಿದಾತ ಸಿ. ಜಿ. ಮೊಸಾಂಡರ್ (1843). ಇದನ್ನು ಪರಿಶುದ್ಧ ಸ್ಥಿತಿಯಲ್ಲಿ ಪ್ರತ್ಯೇಕಿಸಿದವ ಜಿ. ಆರ್ಬೇನ್ (1905). ಸೀರೈಟ್, ಗಾಡೊಲಿನೈಟ್ ಮತ್ತು ಸಾಮರ್‍ಸ್ಕೈಟ್ ಖನಿಜಗಳಲ್ಲಿ ಅಲ್ಪ ಪ್ರಮಾಣ ಟರ್ಬಿಯಮ್ ಇರುವುದು ಕಂಡುಬಂದಿದೆ. ಆದರೆ ಇದನ್ನು ಕೈಗಾರಿಕಾ ಪ್ರಮಾಣದಲ್ಲಿ ಉತ್ಪಾದಿಸುವುದು ಮಾನಸೈಟ್ ಖನಿಜದಿಂದ. ಕೇರಳ ರಾಜ್ಯದ ತಿರುವನಂತಪುರದಲ್ಲಿ ಮಾನಸೈಟಿನ ವಿಪುಲ ಸಂಗ್ರಹವಿದೆ.

	ಟರ್ಬಿಯಮ್ ಬಿಳಿ-ಬೂದು ಬಣ್ಣದ ಲೋಹ. ಇದನ್ನು ಚಾಕಿನಿಂದ ಸರಾಗವಾಗಿ ಕತ್ತರಿಸಬಹುದು, ಅಷ್ಟು ಮೆದು. ತಾಮ್ರದಷ್ಟೆ ಭಾರ. ಇದರ ದ್ರವನ ಬಿಂದು 1356ಲಿ ಅ. ಎರಡು ನಿರ್ದಿಷ್ಟ ಭಿನ್ನರೂಪಗಳಲ್ಲಿ ಸ್ಫಟಿಕೀಕರಿಸುವುದು. ಸಾಮಾನ್ಯ ಉಷ್ಣತೆಯಲ್ಲಿ ವಾಯುವಿನಿಂದ ಪ್ರಭಾವಿತವಾಗದು. ಆದರೆ ಉನ್ನತ ಉಷ್ಣತೆಯಲ್ಲಿ ವಾಯುವಿನಲ್ಲಿರುವ ಆಕ್ಸಿಜನ್ನಿನಿಂದ ಉತ್ಕರ್ಷಿತವಾಗಿ ಚಾಕಲೇಟ್ ಬಣ್ಣದ ಆಕ್ಸೈಡನ್ನು ಕೊಡುತ್ತದೆ. ಟರ್ಬಿಯಮ್ಮಿನ ಅನೇಕ ಸಂಯುಕ್ತಗಳನ್ನು ತಯಾರಿಸಿದ್ದಾರೆ. ಇದರ ಲವಣಗಳೆಲ್ಲ ತ್ರಿವೇಲೆನ್ಸೀಯ ಬಿಳಿ ಪದಾರ್ಥಗಳು. ಇವುಗಳ ಜಲೀಯ ದ್ರಾವಣಗಳು ನಿರ್ವರ್ಣ. ಟರ್ಬಿಯಮ್ ಆಕ್ಸಲೇಟನ್ನು ಕಾಯಿಸಿ ಟರ್ಬಿಯಮ್ ಪರಾಕ್ಸೈಡನ್ನು ತಯಾರಿಸಬಹುದು. ಇದನ್ನು ಬಿಸಿಯಾದ ಸಾರಯುತ ಆಮ್ಲಗಳಲ್ಲಿ ವಿಲೀನ ಮಾಡಿದರೆ ಆಯಾ ಟರ್ಬಿಯಮ್ ಲವಣಗಳು ಉಂಟಾಗುತ್ತವೆ. ಟರ್ಬಿಯಮ್ ಲವಣಗಳ ದ್ರಾವಣಕ್ಕೆ ಕ್ಷಾರವನ್ನು ಸೇರಿಸಿದರೆ ಟರ್ಬಿಯಮ್ ಹೈಡ್ರಾಕ್ಸೈಡ್ ಒತ್ತರಿಸುವುದು. ಟರ್ಬಿಯಮ್ ಅಷ್ಟೇನೂ ಉಪಯುಕ್ತ ಧಾತುವಲ್ಲ. ಆದರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಸುವ ಕ್ಯಾಲ್ಸಿಯಮ್ ಫ್ಲೂರೈಡ್, ಕ್ಯಾಲ್ಸಿಯಮ್ ಟಂಗ್ಸ್ಟೇಟ್ ಮತ್ತು ಸ್ಟ್ರಾನ್ಷಿಯಮ್ ಮಾಲಿಬ್ಡೇಟುಗಳನ್ನು ಡೋಪ್ ಮಾಡಲು ಟರ್ಬಿಯಮ್ಮನ್ನು ಉಪಯೋಗಿಸುವುದುಂಟು.
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ